ನಾನು ಹುಟ್ಟಿದ್ದು, ಬೆಳೆದದ್ದು, ಕುರುಚಲು ಗಡ್ಡ ಮೊದಲು ಬಿಟ್ಟಿದ್ದು, ಉದ್ದ ಕೂದಲು ಬಿಡಲು ಶುರು ಮಾಡಿದ್ದು ಎಲ್ಲ ದಕ್ಷಿಣ ಕನ್ನಡದ ಪುತ್ತೂರಿನ ಪುಟ್ಟ ಪಟ್ಟಣ ಉಪ್ಪಿನಂಗಡಿಯಲ್ಲಿ. ಅಪ್ಪ- ಅಮ್ಮ ಇಬ್ಬರು ಸ್ಕೂಲ್ ಟೀಚರ್ಸ್. ಮೊದಲು ಗಡ್ಡ ಬಿಟ್ಟಾಗ ತಲೆ ಕೆರೆದುಕೊಂಡು 'ಮಗ ಯಾಕೆ ಹೀಗಾದ ' ಅಂತ ತಲೆ ಕೆಡಿಸಿಕೊಂಡವರೂ ಅವರೇ. ಒಂದೆರಡು ಸಲ ತಲೆ ಕೂದಲು ಉದ್ದ ಅಳೆಯುತ್ತಾ 'ಇದರಿಂದ ಯಾವಾಗ ಮುಕ್ತಿ?' ಅಂತ ಕೇಳಿದ್ದೂಇದೆ.
ರಸ್ತೆ ಬದಿಯಲ್ಲಿ ತರಕಾರಿ ಕೂಡ ಕೊಂಡುಕೊಳ್ಳದ ಅಪ್ಪ, ನಾನು ರಸ್ತೆ ಬದಿ ಮಸಾಲೆ ಪುರಿ ಸವಿಯುವುದನ್ನು ಕಂಡು ನಿರಾಸೆಗೊಂಡದ್ದೂಇದೆ. ಆದರೆ ನನಗೆ ಅದೇ ಪ್ರಿಯ. ಒಂದು ದಿನ ಇವೆಲ್ಲ ನನ್ನ ಲೇಖನಗಳಿಗೆ ಸ್ಪೂರ್ತಿಯಾಗುತ್ತವೆ ಅಂತ ನಾನು, ನನ್ನ ಅಪ್ಪ-ಅಮ್ಮ, ಯಾರೂ ಉಹಿಸಿಯೂ ಇಲ್ಲ. ಆಗ ನನಗೆ ಬೇಕಿದದ್ದು, ಸಿಗುತಿದದ್ದುಎರಡು ಅವುಗಳ ರುಚಿ ಮಾತ್ರ. ೨ ರುಪಾಯಿಗೆ ತಟ್ಟೆ ತುಂಬಾ ಮಸಾಲೆ ಪುರಿ, ಅದರ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಮೇಲಿಂದ ಒಂದಸ್ಟು ಶಾವಿಗೆ (sev) ಇಷ್ಟು ಸಿಕ್ಕಿದರೆ, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎನ್ನುತ್ತಾ ಸವಿಯುತ್ತಿದ್ದೆ. ಇದೆಲ್ಲ ನೋಡುವ ಮೊದಲು 'ಮಸಾಲೆ' ಅಂದರೆ ಅಪ್ಪ ಅಮ್ಮ ರುಚಿ ತೋರಿಸಿಕೊಟ್ಟ ಊರ ಹೋಟೆಲುಗಳ ಮಸಾಲೆ ದೋಸೆ ಮಾತ್ರ.
ಇನ್ನೂ ನೆನಪಿದೆ, ಹಿಂದಿನ ದಿನವಸ್ಟೆ ನಮ್ಮೂರ ದೊಡ್ಡ ಹೋಟೆಲ್ - ಆದಿತ್ಯ ಉದ್ಘಾಟನೆಯಾಗಿತ್ತು. ಮೂರನೇ ಕ್ಲಾಸೋ ನಾಲ್ಕನೇ ಕ್ಲಾಸ್ಲಿದ್ದನಾನು ಐಸ್ ಕ್ಯಾಂಡೀ ಚೀಪುತ್ತಾ ಬಸ್ ಸ್ಟಾಂಡ್ನಲ್ಲಿ ನಿಂತಿದ್ದಾಗ, ಅಪ್ಪ - 'ಆದಿತ್ಯ ದಲ್ಲಿ ಇವತ್ತು ಮಸಾಲೆ ದೋಸೆ ಕೊಡಿಸೋಣ ಅಂತಿದ್ದೆ. ನೀನು ಈ ಐಸ್ ಕ್ಯಾಂಡೀ ತಿಂದಾಯ್ತು. ಇವತ್ತಿಲ್ಲ ಇನ್ನು ಮಸಾಲೆ ದೋಸೆ ' ಅಂದಾಗ, ನೀರಾಗುತ್ತಿದ್ದ ಐಸ್ ಕ್ಯಾಂಡೀ ಮುಗಿಸುವುದೋ, ಅಲ್ಲ ಅದನ್ನು ಅಲ್ಲೇ ಬಿಸಾಡಿ ತಪ್ಪಾಯ್ತು ಅಂತ ಅಪ್ಪನ ಮನವೊಲಿಸಿ ದೋಸೆ ಗಿಟ್ಟಿಸಿಕೊಳ್ಳುವುದೋ ಗೊತ್ತಾಗದೆ ಕಣ್ಣು ಪಿಳಿ ಪಿಳಿ ಬಿಟ್ಟುಕೊಂಡು ಅಪ್ಪನ ಮುಖ ನೋಡಿದ ನೆನಪು ಇನ್ನೂ ಹಸಿಯಾಗಿದೆ. 10-12 ರುಪಾಯಿಗೆ ಸಿಗುತ್ತಿದ್ದ ಮಸಾಲೆ ದೋಸೆಗೆ ಹ್ರುದಯದಾಳದಲ್ಲಿ ಒಂದು "ಸ್ಪೆಶಲ್ ಜಾಗ" ಇದ್ದೇ ಇತ್ತು.
ಅಂದು ಹೋಟೆಲ್ ಒಳ ಹೋದರೆ ಮೆನೂ ನೋಡುವ ಪ್ರಶ್ನೆಯೇ ಇರಲಿಲ್ಲ. 'ಒಂದು ಮಸಾಲೆ ದೋಸೆ ನನಗೆ' ಅನ್ನೋದು ಕಾಯಂ ಡೈಲಾಗ್. ತೆಳಗೆ ಹೊಯ್ದು, ಮೇಲಿಂದ ಎಣ್ಣೆ ಸುರಿದು, ಬಟಾಟೆ ಬಾಜಿ ತುಂಬಿಕೊಂಡು roll ಆಗಿ ಬರುತಿದ್ದ ಮಸಾಲೆ ದೋಸೆ, ಆರ್ಡರ್ ಮಾಡಿದಲ್ಲಿಂದ ಟೇಬಲ್ ಬಂದು ಸೇರುವವರೆಗಿನ ಎರಡು ನಿಮಿಷದಲ್ಲಿ ಕಾಲ್ಪನಿಕ ಲೋಕ ತೋರಿಸಿ ಕೊಡುತಿತ್ತು. ಒಬ್ಬನೇ ಹೋಗಿ ದೋಸೆ ತಿನ್ನುವ .ದೈರ್ಯ, ಬಿಲ್ ಕೊಡಲು ಕಾಸು ಎರಡೂ ಇಲ್ಲದ ಕಾಲ. ಹಾಗಾಗಿ ಮಸಾಲೆ ದೋಸೆ ಎಂದರೆ ಅಪ್ಪ ಅಮ್ಮನೊಟ್ಟಿಗೆ ಮಾತ್ರ. ಅದಕ್ಕೆಯೇ ಏನೋ,'ಹೃದಯದಲ್ಲಿ ಅದಕ್ಕೊಂದು 'ಸ್ಪೆಶಲ್ ಜಾಗ'
ಕಾಲೇಜ್ ಮೆಟ್ಟಿಲೇರಿದ ಮೇಲೆ ಮಸಾಲೆ ದೋಸೆಗೊಂದು silent competitor ಹುಟ್ಟಿಕೊಂಡಿತ್ತು - ನಾರ್ಥ್ ಇಂಡಿಯನ್ ರೋಟಿ. ಗೆಳೆಯರ ಜೊತೆಯಲ್ಲಿ ಹೋದಾಗ ಅವುಗಳದ್ದೇ ಕಾರುಬಾರು. ಆದರೂ ಅಪ್ಪ ಅಮ್ಮನೊಂದಿಗಿದ್ದಾಗ ಬಾಯಲ್ಲಿ ಬರುತ್ತಿದದ್ದು 'ನನಗೊಂದು ಮಸಾಲೆ ದೋಸೆ' ಅಂತಾನೆ.
ಕಾಲೇಜಾಯ್ತು, ಕೆಲಸ ಸಿಕ್ಕಾಯ್ತು, ಕೈಯಲ್ಲಿ ಕಾಸು, ಗಿಸೆಯಲ್ಲಿ ಮೊಬೈಲ್, ಕಾಸಿಲ್ಲದಿದ್ದಾಗ ಉಜ್ಜಲು ಒಂದು ಕಾರ್ಡ್. ಬೆಳಗ್ಗಿನ ತಿಂಡಿ ಆಫೀಸಿನ ಫುಡ್ ಕೋರ್ಟಲ್ಲಿ ಶುರು ಮಾಡಿ ವರ್ಷ ಆರಾಯ್ತು. Wait ಮಾಡಿ ತಿನುತ್ತಿದ್ದ ಮಸಾಲೆ ದೋಸೆ ಈಗ ವಿಧಿ ಇಲ್ಲದೆ ತಿನ್ನೋ ತಿಂಡಿ ಆಗಿ ಹೋಗಿದೆ.
ಇವತ್ತಿಗೂ ದೋಸೆ ತೆಳ್ಳಗೆಯೇ ಇದೆ, ಎಣ್ಣೆ ಮುಂಚಿಗಿಂತ ಸ್ವಲ್ಪ ಜಾಸ್ತಿನೇ ಇದೆ. ಬಾಜಿ ಕೇಳಿದರೆ 'ಎಕ್ಸ್‌ಟ್ರಾ' ನೇ ಸಿಗುತ್ತಿದೆ. ಆದರೆ ರುಚಿ ಯಾಕಿಲ್ಲ ಅನ್ನೋ ಮಂಡೆ ಬಿಸಿ ಜಾಸ್ತಿ ಆಗ್ತಾನೆ ಇದೆ. ಮಸಾಲೆ ದೋಸೆ ರುಚಿ ಕಡಿಮೆ ಆಯ್ತಾ ಅಲ್ಲ ನಾನು ಆಸ್ವಾದಿಸೋ ಅವಕಾಶ ಕಳಕೊಂಡನಾ ತಿಳೀದೆ ಮತ್ತೆ ಕಣ್ಣು ಪಿಳಿ ಪಿಳಿ ಮಾಡೋ ಹಾಗಾಗಿದೆ.
ನಾನು ಕಳಕೊಂಡಿದ್ದು ಮಸಾಲೆ ದೋಸೆ ರುಚಿ ಮಾತ್ರಾನಾ? ಐಸ್ ಕ್ಯಾಂಡೀ ತಿನುತಿದ್ದ ದಿನಕ್ಕೂ ಇವತ್ತಿಗೂ, ಮಧ್ಯ ಬೇರೇನೋ ಕಳೆದು ಹೋದ ಹಾಗಿದೆ. ಅದೇನು ಅಂತ ಹುಡುಕೋಕೆ ಈಗ ಗಂಟೆ ೧.೦೦ ಆಗಿದೆ. ಮಧ್ಯಾನ ಅಲ್ಲ. ಆದಿತ್ಯವಾರದ ಮಧ್ಯ ರಾತ್ರಿ ಕಳೆದು ೧.೦೦ ಆಗಿದೆ. ನಾಳೆ ಮತ್ತೆ ಆಫೀಸಿದೆ, ಮತ್ತೆ ಮಸಾಲೆ ದೋಸೆ ಆರ್ಡರ್ ಮಾಡೋದಿದೆ. ಪುರುಸೊತ್ತಾದಾಗ ಅದೇನು ಕಳೆದುಕೊಂಡದ್ದು ಅಂತ ಹುಡುಕೋಕೆ ಒಂದು ಕೆಲಸ ಬಾಕಿ ಇದೆ.
ನಿಮ್ಮ ಲೈಫ್ ಅಲ್ಲಿ ಮಸಾಲೆ ದೋಸೆ ರುಚಿ ಕಡಿಮೆ ಆಗಿದ್ಯಾ? ಹಾಗಿದ್ರೆ ನೀವೂ ಬೇರೇನೋ ಕಳೆದುಕೊಂಡದ್ದು ಹುಡುಕೋದು ಬಾಕಿ ಇದೆ. ಸಿಕ್ಕಿದ್ರೆ ಹೇಳಿ, ನನಗೂ ಸ್ವಲ್ಪ ಸುಲಭ ಆಗುತ್ತೆ! ಏನಂತೀರಾ?