ಅಂದೊಂದಿತ್ತು ಕಾಲ...
ಕ್ಲಾಸಲ್ಲಿ ಕೂತು ನಿದ್ದೆ ತೂಗುವಾಗೆಲ್ಲ ಕೊನೆಯ ಪುಟ ತೆಗೆದು ಏನೋ ಒಂದು ಗೀಚುವ ಅಭ್ಯಾಸ. ಹೀಗೆ ಮಾಡಿ PUC ಪರೀಕ್ಷೆಯಲ್ಲಿ ಸ್ವಲ್ಪ ಮಾರ್ಕ್ ಕಡಿಮೆ ಬಂದದ್ದಂತೂ ಹೌದು. ಇಂದು ಹಿಂತಿರುಗಿ ನೋಡಿದರೆ ಬಾಲಿಶವೆನಿಸಿದರೂ, ಏನೋ ಒಂದು ಬರೆದಿದ್ದೇನೆ, ಇರಲಿ ಅನಿಸುತ್ತಿದೆ. ಒಟ್ಟಿನಲ್ಲಿ ಬದುಕಲ್ಲಿ ಮಾಡಿದೆಲ್ಲವೂ ಏನೋ ಒಂದು ಕಲಿಸುತ್ತದೆ ಅನ್ನುವುದು ನನ್ನ ಭಾವನೆ. ಅದು ಕಲಿಸುತ್ತದೋ ಬಿಡುತ್ತದೋ, ಕಲಿಯುವ ಮನಸ್ಸಿದ್ದರೆ ಕಲಿಯಲು ಆಗುತ್ತದೆ ಅನ್ನೋದಂತೂ ಅರಿತಿದ್ದೇನೆ.
ಆ ಕಾಲದಲ್ಲಿ ಬರೆದ ಒಂದಷ್ಟು ಪುಟ್ಟ ಕವನಗಳು ಇಲ್ಲಿವೆ.
ಅಮ್ಮ
ಅರ್ಥವಿಲ್ಲ ಬಾಳಿನಲ್ಲಿ...
ಅಮ್ಮನಿರದ ಲೋಕದಲ್ಲಿ...
ಎನ್ನಮ್ಮ ಹಿಡಿ ಬಾಳ ಬೆಳಕ...
ನನ್ನ ಬಾಳ ಕೊನೆ ತನಕ...
ಮೌನವೇ ಮಾತಾದಾಗ
ಕೇಳದಿರಬಹುದು ನನಗೆ ಕೋಗಿಲೆ ಹಾಡು
ಕೇಳದಿರಬಹುದು ನನಗೆ ಅಲೆಗಳ ಬಡಿತ
ಆದರೆ ಗೆಳತಿ,
ನೀ ಮಾತಾಡದೆ ಇದ್ದರೂ...
ಕೇಳದಿರದು ನಿನ್ನ ಮನದ ಮಿಡಿತ
ಓ ಭಾವದ ಬಿಂದುಗಳೇ...
ಬತ್ತದ ಕಣ್ಣೀರುಗಳೇ... ಏಕೆ ಕಾಡುವಿರಿ?
ಮನದ ನೋವಿಗೇಕೆ ಬೆಳಕಾಗುವಿರಿ?
ಕಣ್ಣು - ನಿಮ್ಮ ತವರು
ತವರ ತೊರೆವಾಸೆ ನಿಮಗೇಕೆ ಇಂದು?
ನೋವು ತರದಿರಿ ಓ ಭಾವದ ಬಿಂದುಗಳೇ
ಸಂತೋಷದಲ್ಲಿ ನಿಮ್ಮಿರುವಿಕೆ ಇರಲಿ ನನ್ನೊಂದಿಗೆ
ಬಹಳ ವರ್ಷಗಳ ನಂತರ...
ವಿಷಯ ಸಿಕ್ಕಾಗ ಆಥವಾ ಅಗತ್ಯ ಬಿದ್ದಾಗ ಮಾತ್ರ ಎಚ್ಚರವಾಗೋ ನನ್ನೊಳಗಿನ ಸಾಹಿತಿ ಅದೆಷ್ಟೋ ವರ್ಷಗಳ ಬಳಿಕ ಬರೆದ ಕೆಲವು ಸಣ್ಣ ಕವನಗಳು. ಪುರುಸೊತ್ತಾದಾಗ ಗೀಚಿದರೆ, ಇಲ್ಲಿ 'update' ಮಾಡುತ್ತಿರುತೇನೆ. ಮುಂದೊಮ್ಮೆ ತಪ್ಪಿ ಈ ಪುಟದ ಕಡೆ ಬಂದರೆ, ಇಲ್ಲಿ ಬೇರೇನೋ ಇರುವ ಸಾಧ್ಯತೆ ಬಹಳ ಇದೆ.
ಅನುಬಂಧ
ಕಣ್ಣ ಹನಿಯ ತಂದೆ ನೀನು,
ವಶವು ಆದೆ ಅಂದೇ ನಾನು.
ಹೃದಯದಾ ಪ್ರತಿ ಬಡಿತವೂ,
ಬಯಸಿವೆ ನಿನ್ನ ಖುಷಿಯನು
ಬಯಸಿದೆ ಈ ಹೃದಯವು,
ಇರಲಿ ಈ ಅನುಬಂಧವು,
ಎಂದೆಂದೂ ಎಂದು.