ella-sari-aadare-yaavdoo-sari-ilwalla

ನಮ್ಮೊಳಗಿನ ಬೆಂಕಿ (ಚಿತ್ರ ಕೃಪೆ - ಗೂಗಲ್ ದೇವ)


ಎಲ್ಲಾ ಸರಿ... ಆದರೆ ಯಾವ್ದೂ ಸರಿ ಇಲ್ವಲ್ಲಾ...!

ವಾರದ ಮಧ್ಯ... ಅಂದರೆ ಬುಧವಾರ? ಅಲ್ಲ... ಮಾತಿಗಷ್ಟೇ ಹೇಳಿದೆ, ಗುರುವಾರ ಸಂಜೆ ಮತ್ತದೇ ಕಂಪ್ಯೂಟರ್ ಸ್ಕ್ರೀನ್ ನೋಡ್ತಾ ನೋಡ್ತಾ, ಇದೆಲ್ಲಾ ಮೋಹ ಮಾಯೆ ಅಂತ ಅನಿಸಿದ್ದೇ ಹೊರಟು ಬಂದು ಪೆನ್ನು ಪೇಪರ್ ಹಿಡಿದು ಕೂತದ್ದಾಯಿತು. ಆದರೆ subject ಬೇಕಲ್ಲ? Subject ಮತ್ತು content ಇಲ್ಲದೆ ಈ ಹಿಂದೆ ಬರೆದದ್ದು Engineering examನಲ್ಲಿ ಮಾತ್ರ. ಈಗ ಬರೆಯೋಣ ಅಂತ ಕುಳಿತಾಗ ಹೊಳೆದದ್ದು ಬಹಳ ದಿನಗಳಿಂದ ಕಾಡುತಿರುವ ಹಾಡಿನ ಒಂದು ಸಾಲು ಮತ್ತು ಇಂದಸ್ಟೇ ನೋಡಿದ ವೀಡಿಯೋ ಒಂದರಲ್ಲಿ ಹೇಳಿದ್ದ ಕಥೆ. ಅದೇನು ಬರೀತೇನೋ ಗೊತ್ತಿಲ್ಲ, ಬರೀತೇನೆ. ಓದೋದಕ್ಕೆ ಅಂತ link click ಅಂತೂ ಮಾಡಿದ್ದೀರಿ, ಯಾವುದೇ ಕೆಲಸ ಇರಲಿ, ಅರ್ಧಕ್ಕೆ ಬಿಡೋದು ಶ್ರೇಯಸ್ಸಲ್ಲ. So, ಓದಿ!

ಚಂದ್ರ - ಬರೆಯೋಕೆ ಅಂತ ಕುಳಿತ ಹೆಚ್ಚಿನವರಿಗೂಮೊದಲು ಸಿಗುವ subject ಅವನೇ. ಹಸಿದಿರೋ ಕಂದನಿಗೆ ಉಣಿಸೋ ಅಮ್ಮನಿಗೋ, ಆ ಚಂದ್ರನೇ last hope. ಇಷ್ಟಿದ್ದೂ, ಅದೆಷ್ಟೋ ಜನಕ್ಕೆ ಅವನ ಮೇಲಿರೋ ಕಲೆಯೇ ಒಂದು ಸಮಸ್ಯೆ. "ಏನೇ ಹೇಳಿ, ಆ ಕಲೆ ಒಂದಿಲ್ಲದಿದ್ದರೆ, ಚಂದ್ರ ಸೂಪರ್ " ಅಂತ ಒಂದಸ್ಟು ಮಂದಿ ಹೇಳಿದರೆ, ಇನ್ನೊಂದಸ್ಟು ಜನಕ್ಕೆ "ಕಲೆ ಅನ್ನೋದು ಅಂಥಾ ಚಂದ್ರನನ್ನೇ ಬಿಡಲಿಲ್ಲ" ಅನ್ನೋ ಭಾವನೆ. ಬರೆಯೋಕೆ ವಿಷಯ ಇಲ್ಲದೆ ಚಂದ್ರನ ಬಗ್ಗೆ ಬರೀತಾ ಇಲ್ಲ. ಹಾಡೊಂದರ "ನಗುವಾ ಚಂದಿರನಲ್ಲಿ... ಕಲೆಯಾ ಕಾಣೊರೆ ಇಲ್ಲಿ" ಅನ್ನೋ ಗೆರೆ ಅದೆಷ್ಟೋ ದಿನಗಳಿಂದ ಕಾಡುತ್ತಾ ಇದೆ. ಹೌದಲ್ಲವೇ, ನಾವೆಲ್ಲಾ ಅದೆಷ್ಟು 'unsatisfied' ಮತ್ತು 'complaint mode' ನಲ್ಲಿರುತೇವೆ ಅಂದರೆ ಏನೇ ಇದ್ದರೂ ಅಲ್ಲೊಂದು ಕೊರತೆ ಎದ್ದು ಕಾಣುತ್ತೆ. ಹೆಚ್ಚೇಕೆ, ಅಮ್ಮ ಮಾಡಿರೋ ಅಡುಗೆ ಕೂಡ ಖಾರನೋ ಸಿಹಿನೋ ಏನೋ ಒಂದು ತಪ್ಪು ಕಾಣುತ್ತೆ.

ಐದು ವರ್ಷಗಳ ಹಿಂದೆ ಹೊಗೇನಕಲ್ಲು ಜಲಪಾತ ನೋಡೋದಕ್ಕೆ ಅಂತ ಅರ್ಧ ಬೆಳಗ್ಗೆ (ಹೌದು ಬೆಳಗ್ಗೆ ಅನ್ನೋದು ನನ್ನ ನಿದ್ದೆಯ ಸಮಯ!) ಎದ್ದು 220 ಕಿಲೋಮೀಟರ್ ಹೋದರೆ, ಅಲ್ಲಿ ನೋಡ ಸಿಕ್ಕಿದ್ದು ಉಕ್ಕಿ ಹರಿಯುತ್ತಿದ್ದ ಕಾವೇರಿ ಮಾತ್ರ. ಜಲಪಾತ ನೋಡೋದಿರಲಿ, ಅಲ್ಲಿಗೆ ಹೋಗಲಿರುವ ಸೇತುವೆ ಕೂಡ ಮುಳುಗಿ ಹೋಗಿತ್ತು. ಅವತ್ತೇನೋ ದೂರಿಕೊಂಡು, ಬೇಜಾರಲ್ಲಿ ವಾಪಾಸು ಬಂದೆವು. ಆದರೆ, ಇವತ್ತು ಅನಿಸುತ್ತಿದೆ- ಬಯಸಿ ಹೋದರು ಸಿಗದ ರುದ್ರ ರಮಣೀಯ ಎನ್ನುವಂಥ ದೃಶ್ಯ ಅಂದು ಕಣ್ಣ ಮುಂದಿತ್ತು. ಕೆಂಪಗಿನ ನೀರು, ಕಣ್ಣು ಹಾಯಿಸಿದಷ್ಟೂ ದೂರ ಬುರ್ರ್ ಎಂದು ಒಂದೇ ವೇಗದಲ್ಲಿ ಹರಿಯುತ್ತಿದ್ದ ನದಿ. ನಡುವಲ್ಲಿ ಎಲ್ಲೋ ತರಗಿಲೆಯಂತೆ ಕೊಚ್ಚಿಕೊಂಡು ಹೋಗುತ್ತಿದ್ದ ದೈತ್ಯ ಮರ. ಬದುಕಿದ್ದರೆ ನಾಳೆ ಮತ್ತೆ ಹಣ್ಣು ಕೊಡುತೇನೆ ಎಂದು ಕುತ್ತಿಗೆವರೆಗಿನ ನೀರಲ್ಲಿ ಉಸಿರು ಬಿಗಿ ಹಿಡಿದು ನಿಂತ ಸಾಲೋ ಸಾಲು ಮಾವಿನ ಮರಗಳು. ಆ ನದಿಯ ಭೋರ್ಗರೆತದಲ್ಲೂ ಒಂದು ಸಂಗೀತವಿತ್ತು, ಒಂದೇ ವೇಗದಲ್ಲಿ ಹರಿಯುತ್ತಿದ್ದ ನದಿ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಿದ್ದರೂ, ಆ ದೃಶ್ಯದಲ್ಲೊಂದು ಶಾಂತತೆಯಿತ್ತು. ಇರದಿದ್ದುದು ಒಂದೇ... ಅದನ್ನೆಲ್ಲಾ ಆನಂದಿಸೊ ಮನಸ್ಸು.

ಮೊದಲೇ ಹೇಳಿದಂತೇ, ಇಂದಷ್ಟೇ ನೋಡಿದ ರಮೇಶ್ ಅರವಿಂದರ "ಕಥೆ - The Project" ವೀಡಿಯೋದಲ್ಲಿನ ಕಥೆ, ಗಾಢ ಆಲೋಚನೆಯಲ್ಲಿ ಬಿಟ್ಟಿದೆ. ಕಥೆಯಲ್ಲಿ ಅವರು ಅದು ಹೇಗೆ ಆಮೆ ಮರಿಯೊಂದು ಮೊಟ್ಟೆಯಿಂದ ಹೊರ ಬರುತ್ತಿದ್ದಂತೆಯೇ ಒಬ್ಬಂಟಿಯಾಗಿ ಎದುರಿಗಿರುವ ಅಗಾಧ ಸಮುದ್ರದೊಳ ಹೋಗಿ ಜೀವನ ಕಂಡುಕೊಳುತ್ತದೆ ಅನ್ನೋದನ್ನ ಹೇಳ್ತಾ, ನಾವೆಲ್ಲಾ ಹೇಗೆ ಎಲ್ಲ ಇದ್ದೂ complaint ಮಾಡುತ್ತಿರುತ್ತೇವೇ ಅನ್ನೋದನ್ನ ಇನ್ನೂ ಸುಂದರವಾಗಿ ಹೇಳಲಾರದಷ್ಟು ಸುಂದರವಾಗಿ ಹೇಳಿದ್ದಾರೆ.

ನಮ್ಮಲ್ಲಿ ಎಲ್ಲವನ್ನೂ ಸರಿ ಮಾಡುವ ಬಯಕೆಯಿರಲಿ, ಕೇವಲ ದೂರುಗಳಲ್ಲ.

"Perfection is a myth. Perspectives is the truth" ಅನ್ನೋದನ್ನ ಅರಿಯೋಣ .

ಮತ್ತೊಮ್ಮೆ - ಚಂದ್ರನಲ್ಲಿನ ಸೌಂದರ್ಯ ನೊಡೋಣ, ಕೇವಲ ಕಲೆಗಳನಲ್ಲ.

ಅಂದ ಹಾಗೆ ಉದ್ದಕ್ಕೆ ಬಿಟ್ಟು, rubber band ಹಾಕಿ ಕಟ್ಟಿಕೊಂಡಿರೋ ಕೂದಲು ಮತ್ತು ಗಲ್ಲದಲ್ಲಿ ಮಾತ್ರ ಇರೋ ಗಡ್ಡದ ಬಗ್ಗೆ ಬರೆಯೋಕೆಲ್ಲೂ ಅವಕಾಶ ಸಿಕ್ಕಿಲ್ಲ. So, ಮುಗಿಸೋ ಮುಂಚೆ ಇಲ್ಲಿ ತೂರಿಸಿ ಬಿಟ್ಟಿದ್ದೇನೆ.

Opinion ಅನ್ನೋದು ಎಲ್ಲರ ಹತ್ರಾನೂ ಇದ್ದಿದ್ದೇ. ನಿಮ್ ಹತ್ರಾನೂ ಇದ್ರೆ, ನೀವು ಕೊನೆಯ ತನಕ ಒದಿದ್ದೀರಿ ಅಂತ ನನಗೆ ಗೊತ್ತಾಗೋದಕ್ಕೋಸ್ಕರ ಆದ್ರೂ ಕೆಳಗಡೆ ಒಂದು comment ಮಾಡಿ ಬಿಡಿ. ಏನಂತೀರಾ?


About Me